ಕೃಷ್ಣ ಎಸ್ ಎಂ
1932, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ (1999-2004). ಮಹಾರಾಷ್ಟ್ರದ ರಾಜ್ಯಪಾಲರು (2004). ಇವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಸೋಮನಹಳ್ಳಿಯಲ್ಲಿ 1932 ಮೇ 1ರಂದು ಜನಿಸಿದರು. ತಂದೆ ಎಸ್.ಸಿ.ಮಲ್ಲಯ್ಯ, ತಾಯಿ ತಾಯಮ್ಮ. ಇವರ ತಂದೆ ಎಸ್.ಸಿ.ಮಲ್ಲಯ್ಯನವರು ದೀರ್ಘಕಾಲ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು ದೀರ್ಘಕಾಲ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿದ್ದರು. ಮಂಡ್ಯ ಜಿಲ್ಲೆಯ ಪ್ರತ್ಯೇಕ ರಚನೆಗಾಗಿ ಶ್ರಮಿಸಿದ ಪ್ರಮುಖರಲ್ಲಿ  ಅವರೂ ಒಬ್ಬರು.

	ಕೃಷ್ಣ ಅವರ ಪ್ರಥಮಿಕ ಶಿಕ್ಷಣ ಸೋಮನಹಳ್ಳಿಯಲ್ಲಿ ನಡೆಯಿತು. ಅನಂತರ ಇವರ ವಿದ್ಯಾಭ್ಯಾಸ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಮುಂದುವರಿಯಿತು. ಮಹಾಜನ ಶಾಲೆ ಮತ್ತು ಮಹಾರಾಜ ಕಾಲೇಜಿನಲ್ಲೂ ವ್ಯಾಸಂಗ ಮಾಡಿ ಬಿ.ಎ. ಪದವಿ ಗಳಿಸಿ ತರುವಾಯ ಬೆಂಗಳೂರಿನಲ್ಲಿ ಬಿ.ಎಲ್. ಪದವಿ ಪಡೆದರು. ಕಾಲೇಜಿನ ದಿನಗಳಲ್ಲಿ ಇವರು ಉತ್ಸಾಹದಿಂದ ಚರ್ಚಾಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದು ಉತ್ತಮ ವಾಗ್ಮಿ ಎಂಬ ಹೆಸರು ಪಡೆದಿದ್ದರು. ಮುಂದೆ ಇವರು ಅಮೆರಿಕಕ್ಕೆ ತೆರಳಿ ಡಲ್ಲಾಸ್‍ನ ಮೆಥಾಡಿಸ್ಟ್ ವಿಶ್ವವಿದ್ಯಾಲಯದ ಎಂ.ಸಿ.ಎಲ್. ಪದವಿ ಪಡೆದರು. ಅಮೆರಿಕದಲ್ಲಿ ಕೆನಡಿಯವರು ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಪರವಾಗಿ ಇವರೂ ಪ್ರಚಾರ ಮಾಡಿದ್ದರು.

	ಇವರು ಸ್ವದೇಶಕ್ಕೆ ಹಿಂದಿರುಗಿ ಅನಂತರ ವಕೀಲ ವೃತ್ತಿ ಆರಂಭಿಸಿದರು. ಜೊತೆಗೆ ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಕಾನೂನಿನ ಪ್ರಾಧ್ಯಾಪಕರಾಗಿದ್ದರು. ಇವರು ಚಿಕ್ಕಂದಿನಿಂದಲೂ ರಾಜಕಾರಣದಲ್ಲಿ ಆಸಕ್ತಿ ತಳೆದಿದ್ದರು. ಒಮ್ಮೆಸೋಮನ ಹಳ್ಳಿಗೆ ಮಹಾತ್ಮಗಾಂಧೀಜಿಯವರು ಭೇಟಿ ನೀಡಿದ್ದರು. ಸರ್ ಮಿರ್ಜಾ ಇಸ್ಮಾಯಿಲ್ ಮೊದಲಾದಗಣ್ಯರು ಬೆಂಗಳೂರುಮೈಸೂರು ಸಂಚಾರದ ನಡುವೆ ಇವರ ತಂದೆಯವರೊಡನೆ ಮನೆಗೆ ಭೇಟಿ ನೀಡುತ್ತಿದ್ದರು. ಹಾಗಾಗಿ ರಾಜ್ಯದ ಹಲವಾರು ರಾಜಕೀಯ ಮುಖಂಡರ ಪರಿಚಯ ಕೃಷ್ಣರಿಗಿತ್ತು. ಕೃಷ್ಣರು ಒಳ್ಳೆಯ ಮಾತುಗಾರರು. ಇವರು 1962ರ ವಿಧಾನಸಭೆಯ ಚುನಾವಣೆಗೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿ ಆ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು. ಆಗ ಅಂದಿನ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ಮದ್ದೂರಿನ ಎಚ್.ಕೆ.ವೀರಣ್ಣಗೌಡರನ್ನು ಇವರು ಸೋಲಿಸಿದ್ದು ಎಲ್ಲರ ಗಮನ ಸೆಳೆಯಿತು. ಪ್ರಜಾಸಮಾಜವಾದಿ ಪಕ್ಷದ ಯುವ ಸದಸ್ಯರೆಂಬ ಖ್ಯಾತಿಗೆ ಇವರು ಪಾತ್ರರಾದರು.

	ಮುಂದೆ ಇವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಯಾಗುವವರೆಗೆ ನಾಲ್ಕು ದಶಕಗಳ ಕಾಲ ರಾಜಕೀಯದಲ್ಲಿ ಮುಂದುವರಿದರು. 1968ರಲ್ಲಿ ಲೋಕಸಭೆಗೆ ಆಯ್ಕೆಯಾದರು. 1969ರಲ್ಲಿ ಕಾಂಗ್ರೆಸ್ ಪಕ್ಷ ವಿಭಜಿತವಾದಾಗ ಇವರು ಇಂದಿರಾಗಾಂಧಿಯವರ ನೇತೃತ್ವದ ಆಡಳಿತ ಕಾಂಗ್ರೆಸ್ ಪಕ್ಷವನ್ನು ಸೇರಿದರು. 

	1971ರಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. 1972ರಲ್ಲಿ ಲೋಕಸಭಾ ಸದಸ್ಯತ್ವವನ್ನು ತ್ಯಜಿಸಿ ಡಿ. ದೇವರಾಜ ಅರಸು ಸಂಪುಟದಲ್ಲಿ ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತರಾದರು. 1980ರಲ್ಲಿ ಮತ್ತೆ ತಮ್ಮ ಜಿಲ್ಲೆಯಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. 1982ರಲ್ಲಿ ಭಾರತದ ನಿಯೋಗದ ಪ್ರತಿನಿಧಿಯಾಗಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸಿದರು. ಇಂದಿರಾ ಗಾಂಧಿಯವರ ಸಂಪುಟದಲ್ಲಿ ಕೈಗಾರಿಕೆ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದರು (1983-84). ಕೃಷ್ಣರು ತಮ್ಮ ವ್ಯಕ್ತಿತ್ವ ಮತ್ತು ಸ್ನೇಹಪರತೆಯಿಂದ ಇಂದಿರಾ ಗಾಂಧಿಯವರ ಕುಟುಂಬದ ಆಪ್ತರಲ್ಲೊಬ್ಬರಾದರು.

	ಅನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಯಶಸ್ಸು ದೊರಕದಿದ್ದುದರಿಂದ ಕೇಂದ್ರ ಸಂಪುಟದ ಸಚಿವರಾಗುವ ಅವಕಾಶ ತಪ್ಪಿಹೋಯಿತು. ಆಗ ಇವರು ರಾಜ್ಯದ ರಾಜಕೀಯಕ್ಕೆ ಮರಳಿದರು. 1989ರಲ್ಲಿ ರಾಜ್ಯ ವಿಧಾನಸಭೆಗೆ ಆರಿಸಿ ಬಂದು ಅದರ ಸಭಾಪತಿಯಾಗಿ ಆಯ್ಕೆಯಾದರು. ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಗಳಾಗಿದ್ದಾಗ (1992-94) ಇವರು ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದರು (1993-94). 1996ರಲ್ಲಿ ರಾಜ್ಯಸಭಾ ಸದಸ್ಯರಾಗಿ ಚುನಾಯಿತರಾದರು.

	1999ರಲ್ಲಿ ಇವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಿತರಾದರು. ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುನ್ನಡೆಸುವ ಅತ್ಯಂತ ಗುರುತರವಾದ ಹೊಣೆ ಇವರ ಮೇಲೆ ಬಿತ್ತು. ಆಗ ಇವರು ರಾಜ್ಯಾದ್ಯಂತ ನಿರಂತರ ಪ್ರವಾಸ ಕೈಗೊಂಡರು. ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿದರು. ಪಕ್ಷ ಮೂರನೆಯ ಎರಡು ಭಾಗ ಬಹುಮತದೊಂದಿಗೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ಬಂತು. ಲೋಕಸಭೆಗೂ ಗಣನೀಯ ಸಂಖ್ಯೆಯ ಸದಸ್ಯರು ಚುನಾಯಿತರಾದರು. ಈ ಸಾಧನೆಗೆ ಪಾರಿತೋಷಕವೆಂಬಂತೆ ಎಸ್.ಎಂ.ಕೃಷ್ಣ ಅವರು 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದರು.

	ಇವರು ಮುಖ್ಯಮಂತ್ರಿಗಳಾದ ಮೇಲೆ ರಾಜ್ಯದ ಆರ್ಥಿಕ ಮತ್ತು ಆಡಳಿತ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದರು. ತಂತ್ರಾಂಶ ಜಾಗತೀಕರಣಕ್ಕೆ ಸ್ಪಂದಿಸಿದ ಇವರು ಬೆಂಗಳೂರು ಭಾರತದ ಪ್ರಥಮ (ಸಾಫ್ಟ್‍ವೇರ್) ಕೇಂದ್ರವಾಗುವಂತೆ ಮಾಡಿದರು. ಬೆಂಗಳೂರು ನಗರದಲ್ಲಿ ಹಲವಾರು ಮೇಲು ಸೇತುವೆಗಳನ್ನು ನಿರ್ಮಿಸಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿದರು. ವಿಧಾನ ಸೌಧದ ಬಳಿ ವಿಕಾಸಸೌಧ ಎಂಬ ಬೃಹತ್ ಸಚಿವಾಲಯವನ್ನು ನಿರ್ಮಿಸಿದ್ದು ಇವರ ಮುಖ್ಯ ಸಾಧನೆಗಳಲ್ಲೊಂದು. ಇವರ ಕಾರ್ಯಾವಧಿಯಲ್ಲಿ ರಾಜ್ಯದಲ್ಲಿ ಹೆದ್ದಾರಿಗಳ ದುರಸ್ತು ಮತ್ತು ಅಗಲಗೊಳಿಸುವ ಕಾರ್ಯ ಆದ್ಯತೆ ದೊರೆಯಿತು. ತಾಲ್ಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ ಕಂಪ್ಯೂಟರ್ ಮತ್ತಿತರ ಸಲಕರಣೆಗಳನ್ನು ಸಜ್ಜುಗೊಳಿಸಿದರು. ಇದರಿಂದ ಜನಸಾಮಾನ್ಯರು ಅತ್ಯಲ್ಪ ಕಾಲದಲ್ಲಿ ಕೆಲವೊಂದು ಭೂದಾಖಲೆಗಳನ್ನು ಪಡೆಯುವುದು ಸಾಧ್ಯವಾಯಿತು. ಸ್ತ್ರೀ ಸಬಲೀಕರಣದ ಅಂಗವಾಗಿ ಸ್ತ್ರೀಶಕ್ತಿ ಸಂಘಗಳು ರಾಜ್ಯಾದ್ಯಂತ ಸ್ಥಾಪನೆಯಾದವು. ಇವರು ಪ್ರಾಥಮಿಕ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದರು. ಇವರ ಅಧಿಕಾರಾವಧಿಯ ಹೆಚ್ಚು ಕಾಲ ಬರಗಾಲದ ಭೀಕರ ಛಾಯೆ ಆವರಿಸಿದ್ದರಿಂದ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಯಲ್ಲಿ ಸರ್ಕಾರ ಹೆಚ್ಚಾಗಿ ಸವಾಲುಗಳನ್ನೇ ಎದುರಿಸಬೇಕಾಯಿತು. ಕಾಡುಗಳ್ಳ ವೀರಪ್ಪನ್‍ನಿಂದ ವರನಟ ರಾಜಕುಮಾರ್ ಅಪಹರಣ ಮತ್ತು ರಾಜಕಾರಣಿ ನಾಗಪ್ಪ ಅಪಹರಣ ಹಾಗೂ ಹತ್ಯೆ ಕೃಷ್ಣ ಸರ್ಕಾರಕ್ಕೆ ದೊಡ್ಡ ಸಮಸ್ಯೆಗಳನ್ನು ತಂದಿದ್ದವು. 

	ಕೃಷ್ಣ 2004ರಲ್ಲಿ ವಿಧಾನಸಭೆಗೆ, ಅವಧಿಗೆ ಮುನ್ನವೇ ಚುನಾವಣೆ ಪೋಷಿಸಿದರು. ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಪಕ್ಷಕ್ಕೆ ಬಹುಮತ ಲಭಿಸದೆ ಮುಖ್ಯಮಂತ್ರಿ ಹುದ್ದೆಯಿಂದ ಹೊರಗುಳಿಯಬೇಕಾಯಿತು. ಬೆಂಗಳೂರು ನಗರ ಕಾಂಗ್ರೆಸ್‍ಗೆ ಅಧಿಕ ಸ್ಥಾನಗಳು ದೊರಕಿದುವು. 2004 ಡಿಸೆಂಬರ್ 6ರಂದು ಇವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

	`ಎಸ್.ಎಂ.ಕೃಷ್ಣ ಬದುಕುಸಾಧನೆ ಎಂಬ ಬೃಹತ್ ಗೌರವ ಗ್ರಂಥ ಇವರ 68ನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಕಟವಾಯಿತು. ಪ್ರೇಮಾ ಇವರ ಪತ್ನಿ. ಈ ದಂಪತಿಗಳಿಗೆ ಇಬ್ಬರು ಪುತ್ರಿಯರಿದ್ದಾರೆ.  				(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ